ಬೀದಿ ಬೀದಿಯ ಅಲೆದು ರಸ್ತೆ ರಸ್ತೆಯ ಸುತ್ತಿ
ಅವರಿವರ ಮನೆಯ ಹೊರಗಿರುವ
ಹೂಗಳ ತಂದು ನಿನಗರ್ಪಿಸುವೆ
ಇನ್ನಾದರು ದಯ ಬಾರದೆ ದೇವಾ
ಕಾರುಗತ್ತಲೆಯಲ್ಲಿ ಕೊರೆವ ಚಳಿಗಳಲಿ
ಮಳೆಯ ದಾಳಿಯನೆಲ್ಲ ಸೈರಿಸಿಕೊಂಡು
ಹೂಗಳ ತಂದು ನಿನಗರ್ಪಿಸುವೆ
ಇನ್ನಾದರು ದಯ ಬಾರದೆ ದೇವಾ
ಹೂ ಮಾರುವನಲ್ಲಿ ಚೌಕಾಶಿ ಮಾಡಿ
ಮೊಳ ಕಡಿಮೆ ಹಾಕಿದನೆಂದು ಜಗಳವನೆ ಮಾಡಿ
ಹೂಗಳ ತಂದು ನಿನಗರ್ಪಿಸುವೆ
ಇನ್ನಾದರು ದಯ ಬಾರದೆ ದೇವಾ
ಆ ಹುಣಿಮೆ ಈ ಪಾಡ್ಯ ಎಲ್ಲ ಹಬ್ಬವ ಮಾಡಿ
ನೂರು ರೂಪಾಯಾದರೂ ಕೊಂಡು ತಂದು
ಹೂಗಳ ತಂದು ನಿನಗರ್ಪಿಸುವೆ
ಇನ್ನಾದರು ದಯ ಬಾರದೆ ದೇವಾ
Comments
Post a Comment