Skip to main content

Posts

Showing posts with the label kannada poem

ಹಂತಕ

ಓಡಿ ಬಂದು ಅಡಗಿ, ಮುದುಡಿ  ಕುಳಿತು ಕೂಗತೊಡಗಿತು ಮಿಯಾವ್ ಮಿಯಾವ್ ಮಿಯಾವ್ ಏನಾಯಿತು ಬೆಕ್ಕೆ ಯಾಕೆ ಹೆದರಿರುವೆ ನೋಡಲ್ಲಿ ಕ್ರೂರ ನಾಯಿಗಳ ದಂಡ ಬೆನ್ನೆತ್ತಿ ಬಂದು ಕೊಲ್ಲುವವು ನನ್ನ  ಇಲ್ಲಿಲ್ಲ ಇವು ಸಭ್ಯ ನಾಯಿಗಳು ನೀ ಸುಮ್ಮನೆ ಕೂಗಿ ಗಲಾಟೆ ಮಾಡಬೇಡಾ ಇಲ್ಲ ಮನುಜೇ ಇವುಗಳಿಗೆ ಧನ ಮದ ಬಲ ಮದ ತಮಗೆ ಮೇಲಿನ ಬೆಂಬಲವಿದೆಯೆಂಬ ಮದ ದಿಂದ ಕ್ರೌರ್ಯ ಮಿತಿ ಮೀರಿದೆ ನೀ ಸುಮ್ಮನಿರು ಕೂಗಿ ಕೂಗಿ ಸೋತು ಸುಮ್ಮನಾಗುತ್ತಾರೆ ನಾನೆಂದೆ  ನಿನ್ನೆ ನೋಡಿದರೆ ಬೆಕ್ಕು ಅಲ್ಲಾಡದೆ ಬಿದ್ದಿದೆ ನಿರ್ಜೀವಿಯಾಗಿ ಹಂತಕರು  ನಾಯಿಗಳಾ ? ನಾನಾ ?

ವ್ಯೂಹ

ಅವಳು ಬಲ್ಲಳು ಅರಿಯು ಯಾರೆಂದು ಬಲ್ಲಲವಳು ಚಕ್ರವ್ಯೂಹವೆಂದು ಹಿಂದೆ ಖಡ್ಗ ಹಿಡಿದು ನಿಂತಿಹರೆಂದು ಸುತ್ತಲಿಹರೆಲ್ಲ ಶತ್ರುಗಳು ಮಿತ್ರರಾ ಆಪ್ತರೆಲ್ಲಿ ಬರೀ ಭ್ರಮೆ ಹೊರಬರಲು ಅಸಾಧ್ಯ ಬರದಿರಲು ಅಂತ್ಯ ಕುಗ್ಗಿ ಕುಬ್ಜವಾಗಿ ಮಾಯವಾಗುವಳವಳು ಆದರಲ್ಲೇ ಇರುವುದು ಅವಳ ನರಕ ಮರು ದಿನ ಮತ್ತೆಲ್ಲ ಮರೆತು ಮರೀಚಿಕೆಯ ಹುಡುಕಿ ಹೊರಟವಳ ಹುಚ್ಚಿಗೇನು ಹೇಳಲಿ
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯ ಬ್ರಹ್ಮವ ನುಡಿದು ಭ್ರಮಿತನಾದೆನಯ್ಯ ಶೂನ್ಯವ ನುಡಿದು ಸುಖದುಃಖಕ್ಕೆ ಗುರಿಯಾದೆನಯ್ಯ ಗುಹೇಶ್ವರಾ ನಿಮ್ಮ ಶರಣ ಸಾಹಿತ್ಯದಿಂದಾನು ಸದ್ಭಕ್ತನಾದೆನಯ್ಯ       - ಅಲ್ಲಮ ಪ್ರಭು

ಪುಷ್ಪ ಪೂಜೆ

ಬೀದಿ ಬೀದಿಯ ಅಲೆದು ರಸ್ತೆ ರಸ್ತೆಯ ಸುತ್ತಿ ಅವರಿವರ ಮನೆಯ ಹೊರಗಿರುವ ಹೂಗಳ ತಂದು ನಿನಗರ್ಪಿಸುವೆ ಇನ್ನಾದರು ದಯ ಬಾರದೆ ದೇವಾ ಕಾರುಗತ್ತಲೆಯಲ್ಲಿ ಕೊರೆವ ಚಳಿಗಳಲಿ ಮಳೆಯ ದಾಳಿಯನೆಲ್ಲ ಸೈರಿಸಿಕೊಂಡು  ಹೂಗಳ ತಂದು ನಿನಗರ್ಪಿಸುವೆ ಇನ್ನಾದರು ದಯ ಬಾರದೆ ದೇವಾ ಹೂ ಮಾರುವನಲ್ಲಿ ಚೌಕಾಶಿ ಮಾಡಿ ಮೊಳ ಕಡಿಮೆ ಹಾಕಿದನೆಂದು ಜಗಳವನೆ ಮಾಡಿ ಹೂಗಳ ತಂದು ನಿನಗರ್ಪಿಸುವೆ ಇನ್ನಾದರು ದಯ ಬಾರದೆ ದೇವಾ ಆ ಹುಣಿಮೆ ಈ ಪಾಡ್ಯ ಎಲ್ಲ ಹಬ್ಬವ ಮಾಡಿ ನೂರು ರೂಪಾಯಾದರೂ ಕೊಂಡು ತಂದು ಹೂಗಳ ತಂದು ನಿನಗರ್ಪಿಸುವೆ ಇನ್ನಾದರು ದಯ ಬಾರದೆ ದೇವಾ

ಬೆಳೆ

ನಮ್ಮೂರಲ್ಲಿ ನೆಡುತ್ತೇವೆ ತೆಂಗುಗಳ, ಕಂಗುಗಳ ಈ ಬೆಂಗಳೂರಲ್ಲೊ ಬಿತ್ತುತ್ತಾರೆ ಕಲ್ಲುಗಳ ಬೆಳೆಯಲು ಗೋಡೆಗಳ ಯಾರು ತಿನ್ನುವಿರಿ ಈ ಪೈರ ಮನೆಯ ಮನದ ಸುತ್ತೆಲ್ಲ ಗೋಡೆಗಳ ಬೆಳೆದು ಮತ್ತಷ್ಟು ಒಂಟಿಯಾಗುವಿರಿ

ಗೆಲುವಿನ ರೋಧನ

I think I lost my funny bone some where in transit.  To this phase of my life called faint hope? Anyways, this is a piece I wrote many years ago, using actual pen and paper. I think I was stuck some where.  No, this is from pre-blog era, when I was in Muscat. ಪಾಂಚಲೀ, ತಡೆಯಲಿಲ್ಯಾಕೆ ನನ್ನ  ಈ ಕ್ರೂರ ಯುದ್ಧ ಮಾಡದಂತೆ? ಬೇಕಿರಲಿಲ್ಲ ನಮಗೀ ರಾಜ್ಯ  ಹೋಗಲಾರೆ ರಸ್ತೆಯಲಿ  ರುಂಡ ಮುಂಡ ಕೈ ಕಾಲುಗಳು  ಕೂಗುತ್ತಿವೆ  ಮಹಾರಾಜ ಎಲ್ಲಿ ನಮ್ಮ ಪ್ರಾಣ  ಕೂರಲಾರೆ ಸಿಂಹಾಸನದಲಿ  ಮುತ್ತಜ್ಜನ ಶಯ್ಯೆಯ ಬಾಣಗಳು ಚುಚ್ಚುತ್ತಿವೆ   ಯಾರೋ ಅಳುತ್ತಿದ್ದಾರೆ  ಅಮ್ಮ ನೋವೂ  ತುತ್ತು ಅನ್ನ ಉಣಲಾರೆ  ಅಪ್ಪ ನನಗೂ ಎನ್ನುವ ಮಕ್ಕಳು  ಎಲ್ಲಿ ಎಲ್ಲಿ ? ಬರೀ ಭ್ರಮೆ  ಭೀಮಾರ್ಜುನರ ಬಳಿ ಹೋಗಲಾರೆ  ಅವರ ದೀನ ನಿಶ್ಶಬ್ದ ಅಳಲು  ನಮ್ಮ ಮಕ್ಕಳೆಲ್ಲಿ ಅಣ್ಣಾ  ಹದಿನೆಂಟು ಅಕ್ಷೋಹಿಣಿ ನಿಷ್ಪಾಪಿಗಳ  ಹತ್ಯೆಯ ಪಾಪ  ತೊಳೆಯಲಿ ಯಾವ ಗಂಗೆಯಲಿ ? ನೀನ್ಯಾಕೆ ತಡೆಯಲಿಲ್ಲವೇ  ಪಾಂಚಾಲಿ  ಈ ಕ್ರೂರ ನರಹತ್ಯೆಯ ?  

ಎತ್ತರ

ನಮ್ಮ ಮೀರಿಸಬಲ್ಲಿರಾ ಎಂದು ಕೆಣಕುತ್ತಿರುವ ಮರಗಳಿಗಿಂತ ಆಳೆತ್ತರ  ಮೇಲೆ ನಿಂತು ನಾನೇನು ಕಮ್ಮಿ ಎನ್ನುವ ಫ್ಲೈ ಓವರ್ ನ ದುಸ್ತಿತಿ ನೋಡಿ ಕರೆಂಟ್ ಕಂಬದ ಮೇಲೆ ನಿಂತ ಗುಬ್ಬಿ ಕಿಚಿ ಕಿಚಿ ಎಂದು ನಕ್ಕಿತು